ಬೀದರ್: ಬೀದರ ಉತ್ಸವ ನಮ್ಮ ನಿಮ್ಮ ಉತ್ಸವವಾಗಿದ್ದು, ಇದನ್ನು ಜಿಲ್ಲೆಯ ಎಲ್ಲರೂ ಸೇರಿ ಯಶಸ್ವಿಗೊಳಿಸುವ ಮೂಲಕ ರಾಜ್ಯದಲ್ಲಿ ಇದೊಂದು ಮಾದರಿ ಉತ್ಸವವಾಗುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್ ಉತ್ಸವ ಕುರಿತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಪದಾಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2023ರ ಜನೆವರಿ 7, 8 ಮತ್ತು 9 ರಂದು ಬೀದರ್ ಉತ್ಸವವನ್ನು ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಇದಕ್ಕೆ ಇನ್ನು ಒಂದೂವರೆ ತಿಂಗಳು ಕಾಲಾವಕಾಶವಿದ್ದು ಎಲ್ಲರೂ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಈ ಉತ್ಸವ ಯಶಸ್ವಿಗೊಳಿಸಲು ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕೆಂದು ಹೇಳಿದರು.
ಮನೆ, ಅಂಗಡಿ ಮುಂಗಟ್ಟು ಶೃಂಗರಿಸಲು ಸೂಚನೆ
ಬೀದರ್ ಉತ್ಸವದ ದಿನಗಳಂದು ಬೀದರ್ ಜಿಲ್ಲೆಯ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು ಹಾಗೂ ತಮ್ಮ ಮನೆ, ಅಂಗಡಿಗಳು ಸೇರಿದಂತೆ ಇತರೆಡೆಗೆ ದೀಪಾಲಂಕಾರ ಮಾಡಿ ಹಬ್ಬದ ವಾತಾವರಣದಂತಿರಬೇಕು. ಈಗಾಗಲೇ ಹೋಟೆಲ್ ಮಾಲೀಕರ ಸಭೆ ಕರೆದು ಅವರಿಗೆ ಶೇ.60% ರೂಮ್‍ಗಳನ್ನು ಬೀದರ್ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಉಚಿತವಾಗಿ ನೀಡಲು ಹೇಳಿದ್ದು ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಈ ಉತ್ಸವದಿಂದ ಬೀದರ್ ಜಿಲ್ಲೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದಂತಾಗುತ್ತದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರಬಾಬು, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ್ ಶೀಲವಂತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಹಾಗು ಪದಾಧಿಕಾರಿಗಳು ಭಾಗವಹಿಸಿ ಬೀದರ ಉತ್ಸವ ಕುರಿತು ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಉತ್ಸವದ ಒಂದು ದಿನ ಮೊದಲು ಮ್ಯಾರಥಾನ್ ಓಟ ಇರುತ್ತದೆ. ಕಾರ್ಯಕ್ರಮದ ಮೊದಲ ದಿನ ಬೆಳಗ್ಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭವಾಗುತ್ತದೆ. ಪ್ರತಿ ದಿನ ಸಂಜೆ 6 ರಿಂದ 7.15 ರವರೆಗೆ ಸ್ಥಳೀಯ ಕಲಾವಿದರಿಗೆ ನಂತರ ರಾಜ್ಯದ ಕಲಾವಿದರು, ರಾಷ್ಟ್ರ ಮಟ್ಟದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಈ ಉತ್ಸವದಲ್ಲಿ ರೈತ ಮೇಳ, ಪಶು ಮೇಳ, ಪುಸ್ತಕ ಮೇಳ, ಸಂಗೀತ ಮೇಳ, ಮಹಿಳಾ ಉತ್ಸವ, ಗಾಳಿಪಟ ಉತ್ಸವ, ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
Saturday, November 26, 2022
Subscribe to:
Post Comments (Atom)
No comments:
Post a Comment